ಡೆಯಾಕ್, ಫೆರೆಂಟ್ಸ್
1803-1876. ಹಂಗರಿಯ ರಾಜನೀತಿಜ್ಞ. ರಾಷ್ಟ್ರಋಷಿಯೆಂದು ಖ್ಯಾತನಾದವ. 1803ರ ಅಕ್ಟೋಬರ್ 17ರಂದು eóÁಲಕೌಂಟಿಯ ಸಾಜ್ಟಾರ್‍ನಲ್ಲಿ ಹುಟ್ಟಿದ. ನ್ಯಾಯಶಾಸ್ತ್ರ ವ್ಯಾಸಂಗ ಮಾಡಿ ತನ್ನ ಕೌಂಟಿಯ ಆಡಳಿತಸೇವೆಗೆ ಸೇರಿದ. 1833ರಲ್ಲಿ ಕೌಂಟಿಯ ಪ್ರತಿನಿಧಿಯಾಗಿ ಡೈಯೆಟಿಗೆ (ವಿಧಾನ ಸಭೆ) ಚುನಾಯಿತನಾದ. 1839ರಲ್ಲೂ 1841ರಲ್ಲೂ ಈ ಸಭೆಗೆ ಸದಸ್ಯನಾಗಿ ಆಯ್ಕೆ ಹೊಂದಿದ. 1843ರಲ್ಲೂ ಚುನಾಯಿತನಾದರೂ ಚುನಾವಣೆಗಳು ಆಕ್ಷೇಪಾರ್ಹ ರೀತಿಯಲ್ಲಿ ನಡೆದುವೆಂಬ ಕಾರಣದಿಂದ ಆ ಸಭೆಗೆ ಹೋಗಲಿಲ್ಲ. ಅವನು ಅಂಥ ಪ್ರಚಂಡ ವಾಗ್ಮಿಯೇನೂ ಆಗಿರಲಿಲ್ಲ. ಅವನ ಪ್ರಾಮಾಣಿಕತೆ, ವಿವೇಕ, ನ್ಯಾಯಪ್ರಜ್ಞೆ ಮುಂತಾದವುಗಳಿಗಾಗಿ ಅವನು ಉದಾರವಾದಿ ಪಕ್ಷದಲ್ಲಿ ವಿಶೇಷ ಗೌರವ ಪಡೆದಿದ್ದ. ಹಂಗರಿಯ ಸಂವಿಧಾನದ ಹಕ್ಕುಗಳನ್ನು ಸಮರ್ಥಿಸಿ ವಾದಿಸಿದ. ಆಸ್ಟ್ರಿಯದ ಹ್ಯಾಬ್ಸ್‍ಬರ್ಗ್ ರಾಜಪ್ರಭುತ್ವದೊಳಗೆ ಹಂಗರಿಗೆ ಹೆಚ್ಚು ವಾಸ್ತವಿಕ ಸ್ವಾತಂತ್ರ್ಯ ದೊರಕಬೇಕೆಂಬುದೇ ಇವನ ಅಭಿಪ್ರಾಯವಾಗಿದ್ದರೂ ಅದನ್ನು ಹಿಂಸಾತ್ಮಕ ವಿಧಾನಗಳಿಂದ ಸಾಧಿಸಬೇಕೆನ್ನುವುದಕ್ಕೆ ಅವನ ವಿರೋಧವಿತ್ತು. 1847ರಲ್ಲಿ ಸಂಯುಕ್ತ ವಿರೋಧ ಪಕ್ಷದ ಕಾರ್ಯಕ್ರಮವನ್ನು ರಚಿಸಿದವನು ಅವನೇ. ಈ ಕಾರ್ಯಕ್ರಮವೇ ಮುಂದೆ 1848ರ ಒಪ್ಪಂದಕ್ಕೆ ತಳಹದಿಯಾಯಿತು. 1848ರ ಮಾರ್ಚ್ 17ರಂದು ಕೌಂಟ್ ಲಾಯೊಷ್ ಬಾಟ್ಯಾನಿಯ ಸಂಪುಟದಲ್ಲಿ ಮತಪದ್ಧತಿ ಮತ್ತು ಶಿಕ್ಷಣಮಂತ್ರಿಯಾದ. ಆಸ್ಟ್ರಿಯಾದ ವಿರುದ್ಧವಾಗಿ ಹಂಗರಿಯ ಕ್ರಾಂತಿಯುದ್ಧ ಆರಂಭವಾದಾಗ ಸಂಪುಟ ಕೊನೆಗೊಂಡಿತು. ಅವನ ಮಂತ್ರಿಪದವಿಯೂ ಹೋಯಿತು. ಅವನು ಬಂಧನಕ್ಕೆ ಒಳಗಾದ. ಬಿಡುಗಡೆಯಾದ ಮೇಲೆ ರಾಜಕೀಯವನ್ನು ಬಿಟ್ಟುಕೊಟ್ಟು ಕೆಲವು ವರ್ಷ ಆe್ಞÁತವಾಸದಲ್ಲಿದ್ದ. 1854ರಲ್ಲಿ ಮತ್ತೆ ಅವನ ರಾಜಕೀಯ ಪ್ರಭಾವ ತಲೆದೋರತೊಡಗಿತು. ಕ್ರಾಂತಿಕಾರಿ ಪಕ್ಷದ ನಾಯಕರು ಅವನ ಸಲಹೆ ಕೋರಿದರು. ಹಂಗರಿಯಲ್ಲಿ 1848ರಲ್ಲಿ ದೊರೆ 1ನೆಯ ಫ್ರಾನ್ಸಿಸ್ ಯೋಷೆóಫ್ ಹಂಗರಿಯ ಸಂವಿಧಾನವನ್ನು ಪುನಃ ಸ್ಥಾಪಿಸಲು ಒಪ್ಪಿಕೊಂಡಾಗ ಅವನಿಗೆ ಮತ್ತೆ ರಾಜಕೀಯ ನಾಯಕತ್ವ ಪ್ರಾಪ್ತವಾಯಿತು. ಆದರೆ ದೊರೆ ಮತ್ತೆ ವಿಧಾನ ಸಭೆಯನ್ನು ವಿಸರ್ಜಿಸಿದ. ಮುಂದೆ 1866ರಲ್ಲಿ ಪ್ರಷ್ಯದೊಡನೆ ನಡೆದ ಯುದ್ಧದಲ್ಲಿ ಆಸ್ಟ್ರಿಯಕ್ಕೆ ಸೋಲಾಯಿತು. ಡೆಯಾಕ್ ಚಳವಳಿ ಮುಂದುವರಿಸಿದ. ಹಂಗರಿಯ ಮುಖ್ಯ ವಕ್ತಾರನಾಗಿ ಆತ ನಡೆಸಿದ ದೀರ್ಘಕಾಲದ ಸಂಧಾನದ ಅನಂತರ ಕ್ರಮೇಣ ಫ್ರಾನ್ಸಿಸ್ ಯೋಷೆóಫ್ ಅವನ ನ್ಯಾಯಸಮ್ಮತ ಸೂತ್ರಗಳಿಗೆ ಸಮ್ಮತಿಸಬೇಕಾಯಿತು. ಅವನ ಪಕ್ಷದ ಉಗ್ರಗಾಮಿಗಳು ಕೂಡ ಅವಕ್ಕೆ ತಲೆಬಾಗಿದರು. 1867ರ ಒಪ್ಪಂದ ಸಾಧ್ಯವಾಯಿತು. ಈ ಒಪ್ಪಂದದ ಪ್ರಕಾರ ಅಸ್ತಿತ್ವದಲ್ಲಿ ಬಂದ ಜವಾಬ್ದಾರಿ ಸರ್ಕಾರದಲ್ಲಿ ಅವನು ಯಾವ ಅಧಿಕಾರವನ್ನೂ ವಹಿಸಿಕೊಳ್ಳಲು ಒಪ್ಪಲಿಲ್ಲ. ಆದರೂ ಅವನು ಅನೇಕ ವರ್ಷಗಳ ವರೆಗೆ ತನ್ನ ಪಕ್ಷಕ್ಕೆ ಸ್ಫೂರ್ತಿದಾಯಕನೂ ಪಕ್ಷದ ನಾಯಕನೂ ಆಗಿದ್ದ. 1867ರ ಒಪ್ಪಂದದ ಮೂಲಕ ಹಂಗರಿಯ ಸಂವಿಧಾನ ಸ್ಥಾಪಿತವಾಗಿ ಹಂಗರಿಗೆ ಆಸ್ಟ್ರಿಯದೊಡನೆ ಸಮಸ್ಥಾನ ಪ್ರಾಪ್ತವಾಯಿತು. ಆಸ್ಟ್ರಿಯ-ಹಂಗರಿ ರಾಜಪ್ರಭುತ್ವ ಅಸ್ತಿತ್ವದಲ್ಲಿ ಬಂತು. 1876ರ ಜನವರಿ ತಿಂಗಳ 29ರಂದು ಡೆಯಾಕ್ ತೀರಿಕೊಂಡ.

ಡೆಯಾಕ್ ಕೊನೆಯವರೆಗೂ ಬ್ರಹ್ಮಚಾರಿಯಾಗಿಯೇ ಇದ್ದ. ಅವನ ಇತಿಹಾಸ ಪ್ರಜ್ಞೆಯೂ ನ್ಯಾಯe್ಞÁನವೂ ಅಗಾಧವಾಗಿದ್ದುವು. ತನ್ನ ದೇಶದ ಸಲುವಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಆತ ನಿಗರ್ವಿಯಾಗಿದ್ದ. ಅವನು ಎಲ್ಲ ಸಾರ್ವಜನಿಕ ಗೌರವಗಳನ್ನೂ ಹುದ್ದೆಗಳನ್ನೂ ನಿರಾಕರಿಸಿದ. ಅವನ ಭಾಷಣಗಳು ಆರು ಸಂಪುಟಗಳಲ್ಲಿ ಪ್ರಕಟವಾಗಿವೆ.
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ